ಡಿಸೆಂಬರ್‌ ೨೯, ೨೦೧೯: ಮತ್ತೆ ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಆಗಿ ಎರಡನೇ ಪ್ರಸಂಗ ಪ್ರತಿ ಸ್ಕ್ಯಾನ್‌ ಕಮ್ಮಟ ಸಂಪನ್ನ


ಬರೇ ೪ ಜನರ ಸ್ವಯಂಸೇವೆ ಸಿಕ್ಕರೂ ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಒಮ್ಮೆಲೇ ಆಗಿಹೋಗುವ ಮೂಲಕ ಎರಡನೇ ಪ್ರಸಂಗ ಸ್ಕ್ಯಾನ್‌ ಕಮ್ಮಟವು ಫಲಕಾರಿಯಾಗಿ ಸಂಪನ್ನವಾಯಿತು. ವಸಂತಕೃಷ್ಣರ ತಂದೆಯವರಾದ ಡಾ. ಪಟ್ಟಾಜೆ ಗಣೇಶ ಭಟ್ಟರ ಸಂಗ್ರಹದ ಹೆಚ್ಚಿನ ಪ್ರಸಂಗ ಪುಸ್ತಕಗಳು ಸ್ಕ್ಯಾನ್‌ ಆದವು. ಡಾ. ಆನಂದರಾಮ ಉಪಾಧ್ಯ ಹಾಗೂ ರವಿ ಮಡೋಡಿಯವರ ಸಂಗ್ರಹದ ಪ್ರಸಂಗ ಪುಸ್ತಿಕೆಗಳು ಮುಂದಿನ ಕಮ್ಮಟದ ನಿರೀಕ್ಷೆಯಲ್ಲಿ ಸಂಚಿಗಳಲ್ಲಿ ಹಾಗೇ ಉಳಿದವು.‌

ಈ ಕಮ್ಮಟದಲ್ಲಿ ಸ್ಕ್ಯಾನ್‌ ಆದ ಪ್ರಸಂಗಗಳು ಇನ್ನೊಂದು ವಾರದಲ್ಲೇ  ಒಪ್ಪಗೊಂಡು ನಮ್ಮ ಸಂಗ್ರಹದಲ್ಲಿ ಸೇರಿ ಸಂಗ್ರಹವು ೭೦೦ರ ಗಡಿ ದಾಟುವ ಶುಭ ಸಮಾಚಾರವನ್ನು ನಿರೀಕ್ಷಿಸಿರಿ. ಪ್ರಸಂಗಪ್ರತಿಸಂಗ್ರಹ  ಆಂಡ್ರೋಯ್ಡ್ ಆಪ್ ನ ಕೊಂಡಿ : 

ನಟರಾಜ ಉಪಾಧ್ಯರ ಮನೆಗೆ ವಸಂತಕೃಷ್ಣರು ಬೇಗ ಸೇರಿದ ಕೂಡಲೇ ಇಬ್ಬರೂ ಕುಳಿತು, ಅಕಾಡೆಮಿಯಲ್ಲಿ ಸಿಕ್ಕ ಮೂಡಲಪಾಯದ ಘನ ಕಲಾವಿದ ಹೊಸ ಹೆಮ್ಮಿಗೆಯ ಚಿಕ್ಕ ಚೌಡಯ್ಯ ನಾಯಕರ ಸಂಗ್ರಹದ ಮೂಡಲಪಾಯದಲ್ಲಿ ಬಳಕೆ ಇರುವ ೬ ಪ್ರಸಂಗಗಳ ಸ್ಕ್ಯಾನ್‌ ಮಾಡಿದರು.ಅಷ್ಟೊತ್ತಿಗೇ ಅಶ್ವಿನಿ ಹೊದಲ ಅವರು ಮಗಳು ಅಮೂಲ್ಯಳೊಂದಿಗೆ ಸೇರಿಕೊಂಡಾಗ, ಸ್ಕ್ಯಾನಿಂಗಿಗೆ ವೇಗ ಬಂತು.


ಮಧ್ಯಾಹ್ನ ಊಟದ ನಂತರ, ಸೌಹಾರ್ದದ ಭೇಟಿಗೆ ಡಾ. ಆನಂದರಾಮ ಉಪಾಧ್ಯರು ಆಗಮಿಸಿದರು. ಮುಂದಿನ ಯೋಜನೆಯಾಗಬಲ್ಲ "ಯಕ್ಷಪುಸ್ತಕಸಂಗ್ರಹ" ಯೋಜನೆಗೆ ಪೂರ್ವಭಾವಿಯಾದ ಚರ್ಚೆಯನ್ನು ಮಾಡಿದೆವು. ಅದೇ ಸಂದರ್ಭದಲ್ಲಿ ವಸಂತಕೃಷ್ಣರು ಡಾ. ಆನಂದರಾಮ ಉಪಾಧ್ಯರಿಗೆ ಡಾ. ಪಟ್ಟಾಜೆ ಗಣೇಶಭಟ್ಟರ ಪ್ರಸಂಗ ಸಂಕಲನದ ಪುಸ್ತಕ, "ಯಕ್ಷ ದ್ವಾದಶಾಮೃತಮ್"‌ ಎಂಬ ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟರು.


  
 ಇದೇ ಪುಸ್ತಕವನ್ನು ವಸಂತಕೃಷ್ಣರು ಯಕ್ಷವಾಹಿನಿಯ ಗ್ರಂಥಾಲಯಕ್ಕೂ ಉಡುಗೊರೆಯನ್ನಾಗಿತ್ತದ್ದನ್ನು ನಟರಾಜ ಉಪಾಧ್ಯರು ಸ್ವೀಕರಿಸಿದರು.ಕಮ್ಮಟ ಮುಗಿಯುವ ಸಮಯವಾದರೂ ಪಟ್ಟಾಜೆಯವರ ಪ್ರಸಂಗ ಸಂಗ್ರಹದ ಎಲ್ಲಾ ಪುಸ್ತಕಗಳ ಸ್ಕ್ಯಾನ್‌ ಮುಗಿದಿರಲಿಲ್ಲ, ಮನೆಯಲ್ಲಿ ತಾವೇ ಮಾಡಿ ಮುಗಿಸಿ, ತಂದೆಯವರಿಗೆ ಎಲ್ಲಾ ಪುಸ್ತಕಗಳನ್ನು ಶೀಘ್ರವಾಗಿ ಮರಳಿಸುವುದಾಗಿ ವಸಂತಕೃಷ್ಣರು ಹೇಳಿದರು.

ಕಮ್ಮಟದ ಉದ್ದಕ್ಕೂ ಕಾಫಿ, ಚಾ, ತಿಂಡಿಗಳು, ಊಟ ಇವುಗಳ ವ್ಯವಸ್ತೆಯ ಹಿಂದೆ ಅಖಿಲಾ ಮತ್ತು ಆಶಾ ಅವರು ಅತಿಥಿ ಸತ್ಕಾರಕ್ಕೆ ಸಾಕಷ್ಟು ಸಹಕರಿಸಿದರು. ಮೇಲಿನ ಆಶ್ರಮ ಗಾರ್ಡನ್ನಿನಲ್ಲಿ ಬೆಳೆದ ಕರಿಕೆಸುವಿನ ಪತ್ರೊಡೆ, ಸಾರು, ದಾಳಿಂಬೆ ಸಿಪ್ಪೆಯ ತಂಬುಳಿ ನಟರಾಜರಿಂದ ಬಂದರೆ, ಹುರುಳಿ ಸಾರು, ಹಾಲುಬಾಯಿ, ಕೋಡುಬಳೆ ಇತ್ಯಾದಿಗಳು ಅಶ್ವಿನಿ ಹೊದಲ ಅವರಿಂದ ಬಂದಿತ್ತು. ಹತ್ತಿರದ ಉತ್ತರ ಕರ್ನಾಟಕದ ಊಟ ತಂದಿದ್ದು ರುಚಿಯಾಗಿತ್ತು.
ಆಶಾ, ಅಖಿಲಾ

ಕಮ್ಮಟ ಮುಗಿಯುವ ಹೊತ್ತಿಗೆ ಅಮೂಲ್ಯ ಅವರು ತಮ್ಮ ಶಾಲೆಯಲ್ಲಿ ಯೋಜಿತವಾಗಿರುವ ಯಕ್ಷಗಾನ ನೃತ್ಯವೊಂದರ ಅಭ್ಯಾಸವನ್ನು ಪ್ರಸ್ತುತ ಪಡಿಸಿ ಮನರಂಜನೆಯನ್ನೂ ಕೊಟ್ಟರು.


 ಜನವರಿಯಲ್ಲಾಗುವ ಮುಂದಿನ ಕಮ್ಮಟವು ರಾಜರಾಜೇಶ್ವರಿನಗರದ ತಮ್ಮ ಮನೆಯಲ್ಲೇ ಎಂದು ವಸಂತಕೃಷ್ಣ ಪಟ್ಟಾಜೆಯವರು ಘೋಷಿಸಿ ತೆರಳಿದರು. ಸಂಚಿಯಲ್ಲೇ ಉಳಿದ ಪ್ರಸಂಗ ಪುಸ್ತಕಗಳು ಕಿಲಕಿಲ ನಕ್ಕು ನಲಿದವು.

ಕಥಕ್‌ ನೃತ್ಯ ತಾಲೀಮಿಗೆ ಹೋದ ಕಾರಣ, ಕೊನೆಯಲ್ಲಿ ತೆಗೆದ ಸಮೂಹಚಿತ್ರದಲ್ಲಿ ಅಖಿಲಾಳು ಬರದೇ ಉಳಿದಳು.
  
ವಂದನೆಗಳೊಂದಿಗೆ,
- ನಟರಾಜ ಉಪಾಧ್ಯ

Comments

Post a Comment

Popular posts from this blog

ಒಂದೇ ಗೂಗಲ್‌ ಪ್ಲೇ ಸ್ಟೋರಿನ ಆಪ್‌ ನ ಮೂಲಕ "ಪ್ರಸಂಗಪ್ರತಿಸಂಗ್ರಹ" ಹಾಗೂ "ಯಕ್ಷಪ್ರಸಂಗಕೋಶ" ಈ ಎರಡೂ ಯೋಜನೆಗಳ ಎಲ್ಲಾ ಪ್ರಸಂಗಗಳು ಈಗ ನಿಮ್ಮ ಮೊಬೈಲಿನಲ್ಲಿ ಸುಲಭ ಲಭ್ಯ!

ಪ್ರಸಂಗಪ್ರತಿಸಂಗ್ರಹದ ಮೊದಲ ಹೆಜ್ಜೆಯ ಲೋಕಾರ್ಪಣೆ!

900ರ ಗಡಿ ದಾಟಿ ಮಾರ್ಚಿಯಲ್ಲಿ 1000 ಪ್ರಸಂಗಪ್ರತಿಗಳನ್ನು ದಾಟುವ ತವಕದಲ್ಲಿ ಪ್ರಸಂಗಪ್ರತಿಸಂಗ್ರಹ!